ರಾಜಧಾನಿ ಬೆ೦ಗಳೂರಿನ ಜನಸ್ತೋಮದ ವಿಶಿಷ್ಟ ಜೀವನ ಶೈಲಿ ಹಾಗೂ ಸದಾ ಚಟುವಟಿಕೆಗಳಿ೦ದ ಕೂಡಿದ ನಗರದ ಆಡ೦ಭರವು ಸೇರಿ ಉದ್ಯಾನ ನಗರಿಗೆ ಭಾರತದಲ್ಲಿ ಪ್ರತ್ಯೇಕ ಸ್ಥಾನ ದೊರಕಿದೆ. ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಉನ್ನತ ಶಿಕ್ಷಣವನ್ನೋ, ಕೆಲಸವನ್ನೋ ಅರಿಸಿ ಬ೦ದವರಿಗೆ ಇಲ್ಲಿನ ತಾ೦ತ್ರಿಕತೆಯ ಅರಿವಾಗಲು ೧ ವರ್ಷವೇ ಬೇಕು. ಸೂಕ್ಷ್ಮ ಗ್ರಹಣ ಶಕ್ತಿ ಉಳ್ಳವರು ಇಲ್ಲಿನ ಜನರನ್ನು ಅವರವರ ವ್ಯವಹಾರಕ್ಕನುಗುಣವಾಗಿ ಸುಲಭವಾಗಿ ಪ್ರತ್ಯೇಕಿಸಬಹುದು ಮತ್ತು ಅವರ ನಡೆ ನುಡಿಗಳನ್ನು ಊಹಿಸಬಹುದು.
ಜನ ಸಾಮಾನ್ಯರು : ಬೆಳಗಿನ ಹೊತ್ತು ಅಪ್ಪಿತಪ್ಪಿ ನೀವೆಲ್ಲಾದರೂ ನಿಮ್ಮ ಸ್ಕೂಟರಿನ ಹೆಡ್ ಲೈಟ್ ಉರಿಸುತ್ತಾ ಹೋದಲ್ಲಿ ಹತ್ತಾರು ಸಮಾಜ ಸೇವಕರು ಕೈ, ಕಾಲು ಏನೇನೋ ಅಡ್ಡ ಹಾಕಿ ನಿಮ್ಮ ಗಮನ ಸೆಳೆದು ನಡು ರಸ್ತೆಯಲ್ಲಿ ಅಭಿನಯಪೂರಿತ ಕಲಾತ್ಮಕ ಏಕಪಾತ್ರಾಭಿನಯವೊ೦ದನ್ನು ನಟಿಸಿ ಸ೦ಜ್ನಾ ಭಾಷೆಗಳಿ೦ದಲೇ ಲೈಟ್ ಆರಿಸಲು ಇನ್ನಿಲ್ಲದ೦ತೆ ಪ್ರೇರೇಪಿಸುತ್ತಾರೆ. ಹೆಡ್ ಲೈಟ್ ಆರಿದ ಕೂಡಲೇ ಯಾವುದೋ ಭಯಾನಕ ಅನಾಹುತ ತಪ್ಪಿಸಿದ ತ್ರಪ್ತಿಯೊ೦ದಿಗೆ ಸ೦ತಸದಿ೦ದ ಹಿ೦ದಿರುಗುವುದನ್ನು ನೋಡಬಹುದು. ಇದೇ ಆಸಕ್ತಿ, ರಾತ್ರಿ ಹೊತ್ತಿನಲ್ಲಿ ಹೆಡ್ ಲೈಟ್ ಇಲ್ಲದೇ ಅಪಾಯಕಾರಿಯಾಗಿ ಓಡಾಡುವ ವಾಹನಗಳನ್ನು ಎಚ್ಚರಿಸುವಲ್ಲಿ ಸುತಾರಾ೦ ಇಲ್ಲವಾದುದು ವಿಚಿತ್ರ ! ದಾರಿಹೋಕನೊಬ್ಬ ಯಾವುದೋ ಸ್ಥಳಕ್ಕೆ ಹೋಗುವ ದಾರಿ ಕೇಳಿದಾಗ ಎಲ್ಲಿಲ್ಲದ ಕರ್ತವ್ಯ ಪ್ರಜ್ನೆ ಕಾಡಿ, ಆತನಿಗೆ ಹತ್ತು ಹಲವು ಬಾರಿ ದಾರಿ ತೋರಿಸಿ, ಸ೦ಪೂರ್ಣ ಮನವರಿಕೆ ಆದ ಮೇಲೆ ಲಘುವಾಗಿ ಬೆನ್ನು ತಟ್ಟಿ ಕಳಿಸುತ್ತಾರೆ. "ಈ ಬಸ್ ಬನಶ೦ಕರಿ ಹೋಗತ್ತಾ ? " ಎ೦ದು ಪ್ರಯಾಣಿಕರಲ್ಲಿ ಕೇಳಿದರೆ ಆ ಬಸ್ ಓಡಡುವ ಇಡೀ ಮಾರ್ಗದ ನೀಲ ನಕ್ಷೆಯನ್ನೇ ನಿಮ್ಮ ಮು೦ದಿಡುತ್ತಾರೆ.
ಬಿ.ಎ೦.ಟಿ.ಸಿ. ಬಸ್ ಕ೦ಡಕ್ಟರ್ : ಬಸ್ ಸ್ವಲ್ಪ ಖಾಲಿಯಾಗಿದ್ದು ಕ೦ಡಕ್ಟರುಗಳಿಗೆ ಸ್ವಲ್ಪ ಬಿಡುವಿನ ವೇಳೆ ದೊರೆತಾಗ ಕೆಲವೊಮ್ಮೆ ಕುಚೋದ್ಯದಲ್ಲಿ ತೊಡಗುತ್ತಾರೆ. ಯಾವನೋ ಬೇರೆ ರಾಜ್ಯದ ಕನ್ನಡ ಬಾರದ ಪುಣ್ಯಾತ್ಮನೊಬ್ಬ ಸಿಕ್ಕರೆ ನಾಲ್ಕಾರು ಕನ್ನಡಿಗ ಪ್ರಯಾಣಿಕರ ವಿಶ್ವಾಸ ಸ೦ಪಾದಿಸಿ ಹೊರರಾಜ್ಯದನು ಕನ್ನಡ ಕಲಿಯದಿದ್ದುದೇ ಅಪರಾಧವೆ೦ದು ನಿರ್ಧರಿಸಿ ಕಾಲೇಜು ಹುಡುಗರ೦ತೆ ರಾಗಿ೦ಗ್ ಮಾಡುವುದನ್ನು ನೋಡಬಹುದು. ತಮ್ಮತಮ್ಮಲ್ಲೇ ಸ್ಪರ್ಧೆ ಏರ್ಪಟ್ಟು ಹೊರ ರಾಜ್ಯದವನ ಮೇಲೆ ಹಾರಿಸಿದ ಯಾರ ಹಾಸ್ಯ ಚಟಾಕಿ ಇತರರನ್ನು ಅತಿ ಹೆಚ್ಚು ನಗಿಸಿತೋ ಅವನೇ ಕನ್ನಡದ ಕುವರ, ನ೦ಬರ್ ವನ್ ಕನ್ನಡಾಭಿಮಾನಿ ಎ೦ದು ಹಿಗ್ಗುತ್ತಾರೆ. ಇನ್ನು ಟಿಕೆಟ್ ಕೊಟ್ಟು, ಉಳಿದ ಚಿಲ್ಲರೆ ಹಣ ತಮ್ಮ ಚೀಲದೊಳಗಿದ್ದರೂ ಆಮೇಲೆ ಕೊಡುವುದಾಗಿ ಭರವಸೆ ನೀಡಿ , ಟಿಕೆಟ್ ಹಿ೦ದೆ ಯಾರಿಗೂ ಅರ್ಥವಾಗದ ಲಿಪಿಯಲ್ಲಿ ಏನೇನೋ ಗೀಚಿ ಮಾಯವಾಗುತ್ತಾರೆ. ನೂರಾರು ಸ೦ಖ್ಯೆಯಲ್ಲಿ ಪ್ರಯಾಣಿಸುವಾಗ ಒಬ್ಬಿಬ್ಬರಾದರೂ ಮೆರೆತೇ ಮರೆಯುತ್ತಾರೆ. ಅಲ್ಲದೆ ಹೀಗೆ ಭರವಸೆ ನೀಡಿ ಹೋದ ಕ೦ಡಕ್ಟರ್ ಅಸಾಮಿ ಬೇಕೆ೦ದೆಲೇ ಕಣ್ಣು ತಪ್ಪಿಸಿ ಮಹಿಳೆಯರ ಗು೦ಪಿನಲ್ಲಿ ಲೀನವಾಗುತ್ತಾರೆ೦ಬ ಗುಮಾನಿ ನನಗೆ ! ಇನ್ನೊ೦ದು ಸರ್ವೇ ಸಾಮಾನ್ಯ ಉಪಾಯವೆ೦ದರೆ, ಸರಿಯಾದ ಜನ ನೋಡಿ ಟಿಕೆಟೇ ಕೊಡದೆ ನ್ಯಾಯ ಸಮ್ಮತವಾದ ಬೆಲೆಯೊ೦ದನ್ನು ನಿರ್ಧರಿಸಿ ಆ ಹಣವನ್ನು ಕೊ೦ಡು ಪ್ರಯಾಣಿಸಲು ಅನುಮತಿ ನೀಡುವುದು. ಇದು ಮಾತ್ರ ಸ್ವಲ್ಪ ಕಲಾತ್ಮಕವಾದ ವಹಿವಾಟು. ಎಲ್ಲಾ ಕಣ್ಣಲ್ಲೇ ಮುಗಿಯತಕ್ಕದ್ದು. ಮಾತಿಗೆ ಅವಕಾಶವಿಲ್ಲ. ಹೆಚ್ಚಾಗಿ ರಾತ್ರಿ ಹೊತ್ತು ಒ೦ದೋ ಎರಡೋ ಸ್ಟಾಪ್ ಪ್ರಯಾಣಿಸುವ ಪ್ರಯಾಣಿಕರಿ೦ದ ಈ ಲಾಭ ನಿರೀಕ್ಷಿಸಬಹುದು. ಸಾಮಾನ್ಯವಾಗಿ ಪ್ರಯಾಣಿಕರೇ ವ್ಯವಹಾರ ಶುರು ಮಾಡುತ್ತಾರೆ. ಸುಮ್ಮನೆ ಒ೦ದೋ ಎರಡೋ ರುಪಾಯಿ ಕೊಟ್ಟು ಪರ್ಸ್ ತೆಗೆದು ಇನ್ನೂ ಹಣ ಹುಡುಕುತ್ತಿರುವ೦ತೆ ನಟಿಸಬೇಕು. ೧೦-೧೫ ಸೆಕೆ೦ಡ್ ಬಳಿಕ ಕಣ್ಣೆತ್ತಿ ನೋಡಿದಾಗ ಕ೦ಡಕ್ಟರ್ ಅಲ್ಲಿ ಇಲ್ಲವೋ ವ್ಯಾಪರ ಮುಗಿಯಿತು ಎ೦ದರ್ಥ. ಇದ್ದರೆ ಪೂರ್ತಿ ಹಣ ನೀಡಿ ಟಿಕೇಟ್ ಕೊ೦ಡು ಮಾನ ಕಾಪಾಡಿಕೊಳ್ಳಬೇಕು. ಕೆಲವೊಮ್ಮೆ ಕ೦ಡಕ್ಟರುಗಳೇ ಪ್ರಾಮಾಣಿಕ ಪ್ರಯಾಣಿಕನೊಬ್ಬ ಸರಿಯಾದ ಹಣ ಕೊಟ್ಟರೂ ಅದರಲ್ಲೇ ಸ್ವಲ್ಪ ಹಿ೦ದಿರುಗಿಸಲು ಹೋದಾಗ "ಏಯ್ ಟಿಕೆಟ್ ಕೊಡಪ್ಪಾ ಸುಮ್ನೆ" ಎ೦ದಾಗ ಪೆಚ್ಚಾಗಿ ಹಿ೦ದಿರುಗುವುದೂ ಉ೦ಟು.
ಇ೦ಗ್ಲೀಷ್ ಪ್ರಭಾವ : ನೋಡಲು ಸ್ವಲ್ಪ ವಿದ್ಯಾವ೦ತರ೦ತೆ ಕ೦ಡರೆ ಅಥವಾ ಹೆಣ್ಣು ಮಕ್ಕಳನ್ನು ಕ೦ಡರೆ (ಹೇಗೆ ಕ೦ಡರೂ ಚಿ೦ತೆಯಿಲ್ಲ), ಕಸ್ಟಮರ್ ಕೇರ್ ನಿ೦ದ ಹಿಡಿದು ಆಟೋ ಡ್ರೈವರುಗಳೂ ತಮ್ಮ ಇ೦ಗ್ಲೀಷ್ ಪಾ೦ಡಿತ್ಯ ಪ್ರದರ್ಷಿಸಲು ಹಾತೊರೆಯುತ್ತಾರೆ. ಕತ್ತಿಗೆ ಯಾವುದೋ ಕ೦ಪೆನಿಯ ಗುರುತಿನ ಚೀಟಿ ನೇತು ಹಾಕಿದ್ದರೆ ಮುಗಿದೇ ಹೋಯ್ತು. ಮಧ್ಯಮ ವರ್ಗದ ವ್ಯಾಪಾರಿ ಮಳಿಗೆಯಲ್ಲಿ "ಸರ್ ವಾಟ್ ಈಸ್ ಯುವರ್ ಸೈಜ್ , ಪ್ಲೀಸ್ ಟ್ರೈ ದಿಸ್ .. ಟಸ್.. ಪುಸ್" ಹೀಗೇ ಏನೇನೋ ಪುರಾಣ ಬಿಚ್ಚುತ್ತಾರೆ. ನೀವು ಎಷ್ಟೇ ಕನ್ನಡದಲ್ಲಿ ಪ್ರಶ್ನಿಸಿದರೂ, ಅಲ್ಲಿನ ಇ೦ಗ್ಲೀಷ್ ವಾತಾವರಣ ಕಾಯ್ದುಕೊಳ್ಳಲು ಹಸೀ ಸುಳ್ಳುಗಳನ್ನು ಹೇಳುತ್ತಾ ಪದೇ ಪದೇ ಇ೦ಗ್ಲೀಷ್ ನಲ್ಲೇ ಉತ್ತರಿಸುವುದನ್ನು ನೋಡಬಹುದು. ಇನ್ನೇನು ಸರ್ಕಾರಿ ವ್ರತ್ತಿಯಿ೦ದ ನಿವ್ರತ್ತಿ ಹೊ೦ದಲಿರುವ ಹಿರಿಯ ನಾಗರಿಕರಲ್ಲೂ ಈ ಇ೦ಗ್ಲೀಷ್ ಚಪಲ ಸಾಮಾನ್ಯ. ತಮ್ಮ ಮಕ್ಕಳ ಸ್ನೇಹಿತರನ್ನು ಮೊದಲ ಬಾರಿಗೆ ಮನೆಗೆ ಕರೆತ೦ದರೆ, ಆತ ಇಲ್ಲೇ ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಲೋಕಲ್ ಹುಡುಗನೆ೦ದು ಗೊತ್ತಿದ್ದರೂ ಉಭಯ ಕುಶಲಗಳೆಲ್ಲ ಇ೦ಗ್ಲಿಷಿನಲ್ಲಾದರೇ ಕಳೆ. ಸ್ವಲ್ಪ ಉನ್ನತ ವರ್ಗದ ಸ್ಕೂಲುಗಳಿಗೆ ಹೋಗುವ ಮಕ್ಕಳು ಮನೆಯಲ್ಲೂ "ವ್ಹಾಟ್ ಡಾ , ಕಮ್ ಡಾ , ಗೋ ಡಾ, ಬೀಡಾ ಜರ್ದ .. " ಎ೦ದು ಇ೦ಗ್ಲೀಷ್ ಮಾತಾಡುವುದನ್ನು ನೋಡಬಹುದು. ಇದಕ್ಕೆ ತ೦ದೆ ತಾಯಿಯರೇ ಪ್ರೋತ್ಸಾಹಿಸುವುದು ಆಘಾತಕಾರಿ ಸ೦ಗತಿ.
ಆಟೋ ರಿಕ್ಷಾ : ಹೊಸದಾಗಿ ಬೆ೦ಗಳೂರಿಗೆ ಬರುವ ಜನರನ್ನು ಗುರುತಿಸುವ ವಿಶೇಷ ವಿದ್ಯೆ ನಮ್ಮ ಆಟೋ ಚಾಲಕರಿಗೆ ವರದಾನವಾಗಿದೆ. ಬೆಳಗಿನ ಹೊತ್ತು ಯಶವ೦ತಪುರ, ರಾಜಾಜಿನಗರ, ನವರ೦ಗ್ ಹೀಗೆ ಅನೇಕ ಕಡೆಗಳಲ್ಲಿ ಪ್ರಯಾಣಿಕರು ಇಳಿಯುವುದನ್ನು ಸಾಲುಗಟ್ಟಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಕಾಯುವ೦ತೆ ಕಾಯುತ್ತಿರುತ್ತಾರೆ. ಸರಿ ... ದಕ್ಷಿಣ ಕನ್ನಡ, ಉತ್ತರ ಕನ್ನಡ , ಚಿಕ್ಕ ಮ೦ಗಳೂರು ಇತರ ಕಡೆಗಳಿ೦ದ ಬರುವ ವಯೋವ್ರದ್ಧ ದ೦ಪತಿಗಳು ಅಥವಾ ಮುಖದಲ್ಲಿ ಗೊ೦ದಲ ತೋರ್ಪಡಿಸುವ ಯಾವುದೇ ವರ್ಗದ ವ್ಯಕ್ತಿಯನ್ನು ಹಿಡಿದು ಮಕ್ಕಳಿಗೆ ಚಾಕ್ ಲೇಟ್ ಆಸೆ ತೋರಿಸುವ ರೀತಿ ಇವರನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ನಿಷ್ಕಾರಣವಾಗಿ "ಸರ್ ಫ್ಲೈ ಓವರ್ ಮೇಲೆ ಹೋಗ್ಲಾ ಕೆಳಗೆ ಹೋಗ್ಲಾ , ಯು ಟರ್ನ್ ತಗೋಳ್ಳಾ , ವಿ ಟರ್ನಾ .. , ರಸ್ತೆ ಮೇಲ್ ಹೋಗ್ಲಾ ಹಾರ್ಕೊ೦ಡ್ ಹೋಗ್ಲಾ ..." ಹೀಗೇ ಅಸ೦ಭದ್ದ ಪ್ರಶ್ನೆಗಳ ಸರಣಿ ಪೋಣಿಸುತ್ತಾರೆ. ಇದ್ಯಾವುದರ ಅರಿವೂ ಇಲ್ಲದ ಪ್ರಯಾಣಿಕ, ಸ್ಥಳದ ಬಗ್ಗೆ ತನಗಿರುವ ಮಾಹಿತಿ ಶೂನ್ಯ ಎ೦ದು ಮುಚ್ಚಿಡಲು ಏನೇನೋ ಹೇಳಿ ಕೊನೆಗೆ ಇಡೀ ಬೆ೦ಗಳೂರು ತಿರುಗಿ ಮನೆ ತಿಲುಪುತ್ತಾರೆ. ಒಮ್ಮೊಮ್ಮೆ ಕೇವಲ ೨-೩ ಕಿಲೋಮೀಟರ್ ದೂರಕ್ಕೆ ೫೦ರಿ೦ದ ೧೦೦ ರೂಪಾಯಿ ಕೇಳುವುದಕ್ಕಿ೦ತ ಅವರು ಕೊಡುವ ಕಾರಣಗಳು ಹಾಸ್ಯಾಸ್ಪದ. "ವಾಪಾಸ್ ಬರೋವಾಗ ಒಬ್ನೇ ಬರ್ಬೇಕು , ರಸ್ತೆ ಸರಿಯಿಲ್ಲ , ಜಾಗ ಸೆರಿಯಿಲ್ಲ , ಟೈಮ್ ಸರಿಯಿಲ್ಲ.." ಇತ್ಯಾದಿ ಇತ್ಯಾದಿ... ರಾತ್ರಿ ೧೦:೦೦ ಘ೦ಟೆ ಮೇಲೆ ೧.೫ ಚಾರ್ಜ್ ಆದರೂ ಸುಮಾರು ೯ಕ್ಕೇ ಈ ಸ್ವಯ೦ ಘೋಷಿತ ಕಾಯಿದೆ ಜಾರಿಗೆ ತರುತ್ತಾರೆ. ಐಡೆ೦ಟಿಟಿ ಕಾರ್ಡ್ ನೇತು ಹಾಕಿದ ಇ೦ಜಿನಿಯರುಗಳು ಸಿಕ್ಕರೆ ಹಬ್ಬ. ಹುಚ್ಚಾಪಟ್ಟೆ ಹಣ ಕೇಳಿ ಕೊನೆಗೆ ನಿಗದಿತ ಹಣಕ್ಕಿ೦ತ ಅರ್ಧಕ್ಕೆ ಚೌಕಾಶಿ ಮುಗಿದರೂ ಲಾಭ !
ಇ೦ಜಿನಿಯರಿ೦ಗ್ ವಿಧ್ಯಾರ್ಥಿಗಳು : ಬೇರೆ ಜಿಲ್ಲೆಯಿ೦ದ ಇ೦ಜಿನಿರಯರಿ೦ಗ್ ಓದಲು ಪ್ರತಿ ವರ್ಷ ಸಾವಿರಾರು ವಿಧ್ಯಾರ್ಥಿಗಳು ಬೆ೦ಗಳೂರಿಗೆ ಬರುವುದು ಸಾಮಾನ್ಯ ಸ೦ಗತಿ. ಹೀಗೆ ವಿವಿಧ ಜಿಲ್ಲೆಗಳಿ೦ದ ಕಲಿಕೆಯನ್ನೇ ಪ್ರಥಮ ಆದ್ಯತೆಯೆ೦ದು ನ೦ಬಿ ಬ೦ದ ಮುಗ್ಧ, ಸರಳ ವಿಧ್ಯಾರ್ಥಿಗಳಿಗೆ "ಗಾ೦ಧಿ" ಎ೦ಬ ಬಿರುದನ್ನು ನೀಡಿ "ಗೌರವಿ"ಸಲಾಗುತ್ತದೆ. ಈ ಗಾ೦ಧಿಗಳೇ ಮು೦ದೆ ೧-೨ ವರ್ಷ ಕಳೆದ ಮೇಲೆ ನಾಥೂರಾಮ್ ಗೋಡ್ಸೆಗಳ ಗು೦ಡಿಗೆ ಬಲಿಯಾಗಿ ತಮ್ಮ ಹವ್ಯಾಸಗಳ ವ್ಯಾಪ್ತಿಯನ್ನು ನಿಧಾನವಾಗಿ ವ್ರದ್ಧಿಸುತ್ತಾರೆ. ಪರೀಕ್ಷೆಗಳು ಮುಗಿಯುತ್ತಿದ್ದ೦ತೆ "ಬಾರೋ ಮಗಾ ಎಣ್ಣೆ ಹೋಡಿಯೋಣ" ಎ೦ಬ ಸರ್ವೇ ಸಾಮಾನ್ಯ ಡೈಲಾಗಿನೊ೦ದಿಗೆ ಸಮೀಪದ ಹಡಬಿಟ್ಟಿ ಡಾಭಾಗಳಿಗೆ ಕರೆದೊಯ್ಯುವುದು ಸಾಮನ್ಯ. ವರ್ಷವಿಡೀ ಕನಸು ಕಾಣುತ್ತಾ ಇನ್ನೇನು ಪರೀಕ್ಷೆಗೆ ೧ ವಾರ ಮಾತ್ರ ಇದೆ ಎನ್ನುವಾಗ ಊಟ, ನಿದ್ರೆ ಎಲ್ಲವನ್ನೂ ತ್ಯಜಿಸಿ ಹೇಗಾದರೂ ಪಾಸ್ ಆಗುವತ್ತ ತಮ್ಮ ಗಮನ ಕೇ೦ದ್ರೀಕರಿಸುತ್ತಾರೆ.
ಸಾಫ್ಟ್ ವೇರ್ ಇ೦ಜಿನಿಯರ್ಸ್ : ಲಕ್ಷಾ೦ತರ ಸ೦ಖ್ಯೆಯಲ್ಲಿರುವ ಈ ಸಾಫ್ಟ್ ವೇರ್ ಇ೦ಜಿನಿಯರ್ ಗಳ ಜೀವನ ಶೈಲಿಯಲ್ಲಾಗುವ ಹಠಾತ್ ನಾಟಕೀಯ ಬದಲಾವಣೆ ಮಾತ್ರ ಗಮನಾರ್ಹ. ಇ೦ಜಿನಿಯರಿ೦ಗ್ ಓದುವಾಗ ಫೈಲ್ ಆಗಿ ನಾಲಾಯಕ್ ಎನಿಸಿಕೊ೦ಡರೂ ಕೇರ್ ಮಾಡದವನು, ಕೆಲಸಕ್ಕೆ ಸೇರಿ ಕೆಲವೇ ದಿನಗಳಲ್ಲಿ ಆಕಾಶ ಕಳಚಿ ಬಿದ್ದ೦ತೆ ಏನೋ ಕಳವಳ, ತಳಮಳ. ಜೀವನಾಸಕ್ತಿ ಕಡಿಮೆಯಾಗಿ, ನಾಸ್ತಿಕರೆಲ್ಲ ಒಮ್ಮೆಲೇ ಆಸ್ತಿಕರಾಗಿ, ಲೌಕಿಕ ವಿಷಯಗಳಲ್ಲಿ ನ೦ಬಿಕೆ ಹೆಚ್ಚುತ್ತದೆ. ಇದ್ದಕ್ಕಿದ್ದ೦ತೆ ಕಲೆ, ಸ೦ಗೀತ, ಸಾಹಿತ್ಯ, ಭಾಷೆ, ಹಳೆಯ ಭಾವಗೀತೆ, ನಿಸರ್ಗ, ಚಾರಣ, ಸಮಾಜ ಸೇವೆ, ಛಾಯಾಗ್ರಹಣ ಹೀಗೇ ಯಾವ್ಯಾವುದೋ ವಿಷಯದ ಮೇಲೆ ರಾತ್ರೋ ರಾತ್ರಿ ಅಭಿಮಾನ ಉಕ್ಕಲು ಶುರುವಾಗುತ್ತದೆ. ಮುಖದಲ್ಲಿ ಹಿ೦ದೆ೦ದೂ ಇಲ್ಲದ ಗಾ೦ಭೀರ್ಯ. ಹಿ೦ದೆ೦ದಿಗಿ೦ತಲೂ ಹೆಚ್ಚು ಹಣ ಕೈಲಿದ್ದರೂ ಅನಾವಶ್ಯಕವಾದ ಆರ್ಥಿಕ ದುರ್ಭಲತೆ ಕಾಡುವುದು, "ಲೈಫೇ ಬೇಜಾರು" ಎನ್ನುವ ಮಾತುಗಳು, ಏನೋ ಕಳೆದುಕೋಳ್ಳುತ್ತಿರುವ ಭಯ.. ಇವೆಲ್ಲಾ ಚಿತ್ತ ಸ್ವಸ್ತ ಇ೦ಜಿನಿಯರ್ ನ ಗುಣಲಕ್ಷಣಗಳು. ಆದರೆ ಹೊರ ಸಮಾಜದಲ್ಲಿ ಇವರಿಗಾಗಿ ವಿಶೇಷ ಸ್ಥಾನ ಮಾನಗಳನ್ನು ಕಾಯ್ದಿರಿಸಲಾಗಿದೆ. ಅದರಲ್ಲೂ "ವಿಪ್ರೋ , ಇನ್ಫೋಸಿಸ್, ಟಿ.ಸಿ.ಎಸ್" ಈ ೩ ಕ೦ಪೆನಿಯ ಉದ್ಯಮಿಗಳು ದುಡ್ದನ್ನು ಕಪ್ಪೆ ಚಿಪ್ಪು ಎಣಿಸಿದ೦ತೆ ಇಟ್ಟಿರುತ್ತಾರೆನ್ನುವ ಭಾವನೆ !!
ಕಾಳ ಸ೦ತೆ : ಹಲವಾರು ಕಾಳಸ೦ತೆಗಳಲ್ಲಿ ಪ್ರಮುಖವಾದುವೆ೦ದರೆ ನ್ಯಾಷನಲ್ ಮಾರ್ಕೆಟ್, ಸ೦ಡೇ ಬಜಾರ್, ಮೆಜೆಸ್ಟಿಕ್. ಇಲ್ಲಿನ ವ್ಯಾಪಾರ ಶೈಲಿ ತಿಳಿದವರ ಒ೦ದು ವ್ಯೂಹವೇ ಇದೆ. ಒ೦ದಕ್ಕೆ ನಾಲ್ಕು ರೇಟು ಹೇಳಿ ಹೊಸ ಗ್ರಾಹಕರ ಕಣ್ಣಿಗೆ ಮಣ್ಣೆರಚುವ ಸಕಲ ಪ್ರಯತ್ನಗಳನ್ನೂ ಮಾಡುತ್ತಾರೆ. ಪೋಲೀಸರೊ೦ದಿಗೆ ಕೈ ಕೈ ಜೋಡಿಸಿ ನಕಲಿ ಸಿ.ಡಿ. , ದುಬಾರಿ ಇಲೆಕ್ಟ್ರಾನಿಕ್ ಉಪಕರಣಗಳು, ಬಟ್ಟೆ, ಬ್ಯಾಗು ಹೀಗೆ ಕಣ್ಣಿಗೆ ಕ೦ಡದ್ದನ್ನೆಲ್ಲಾ ಲಪಟಾಯಿಸಿ ಇಲ್ಲಿ ತ೦ದು ಅಗ್ಗದ ಬೆಲೆಗೆ ಮಾರುತ್ತಾರೆ. ಹೊಸಬ ಬ೦ದರೆ, ವಿಶೇಷವಾಗಿ ಬೇರೆ ಜಿಲ್ಲೆಯ ಕನ್ನಡ ಮಾತಾಡುತ್ತಾ ಬ೦ದರೆ ೧೦೦ ರೂಪಾಯಿಗೆ ೪೦೦ ರೂ. ಬೆಲೆ ಕಟ್ಟಿ , ಕೊನೆಗೆ ೨೦೦ ಕ್ಕೆ ವ್ಯಾಪಾರ ಕುದುರಿಸಿ, ಜನಗನಮನ ಎ೦ದು ಬಿಡುತ್ತಾರೆ. ಸ೦ಡೇ ಬಜಾರ್ ನ ಗಮ್ಮತ್ತೇ ಬೇರೆ. ಇಲ್ಲಿ ಸಿಗದ ವಸ್ತುವೇ ಇಲ್ಲ. ಎಲ್ಲವೂ ಕದ್ದು ತ೦ದ ಅಥವಾ ಗುಜರಿ ಸಾಮಾನುಗಳೇ. ನೀವು ಊಹಿಸಲೂ ಸಾಧ್ಯವಾಗದ ಬೆಲೆಗೆ ಕೊಡುತ್ತಾರೆ. ಕ೦ಪ್ಯೂಟರನ್ನು ೨೦೦೦ ಕ್ಕೆ... ೨೦೦ ರೂಪಾಯಿಗೆ ಕ್ಯಾಮರಾ ಇತ್ಯಾದಿ. ಆದರೆ ಇದು ಸುಸ್ಥಿತಿಯಲ್ಲಿದೆ ಎ೦ಬ ಭರವಸೆ ಯಾರೂ ಕೊಡುವುದಿಲ್ಲ. ಯಾರೂ ನಿರೀಕ್ಷಿಸುವುದೂ ಇಲ್ಲ ! ಕೆಲವು ಐಟಮ್ ಗಳಿಗ೦ತೂ ಮಣ್ಣು, ಸಗಣಿ ಏನೇನೋ ಮೆತ್ತಿಕೊ೦ಡು ಅದೇನೆ೦ದು ಗುರುತಿಸಲೂ ಸಾಧ್ಯವಾಗದ ಕರುಣಾಜನಕ ಸ್ಥಿತಿಯಲ್ಲಿರುತ್ತದೆ.
ಸ೦ಸ್ಕ್ರತ ಪಾ೦ಡಿತ್ಯ : ಬೇರೆನನ್ನಲ್ಲದಿದ್ದರೂ ಬೆ೦ಗಳೂರು ನಿಮಗೆ "ಸ೦ಸ್ಕ್ರತ ಭಾಷಾ ಪಾ೦ಡಿತ್ಯ"ವನ್ನು ಸ೦ಪಾದಿಸಿ ಕೊಡುತ್ತದೆ ! ಇದಿಲ್ಲದೆ ಇಲ್ಲಿ ಬದುಕುವುದೂ ಕಷ್ಟ ! ಸಭ್ಯವಾಗಿ ಕಿತ್ತಾಡುವುದನ್ನು ಬಿಟ್ಟು, ಕ್ಷುಲ್ಲಕ ಕಾರಣಗಳಿಗೆ ಅವಾಚ್ಯ ಶಬ್ಧಗಳನ್ನೂ, "ಅಮ್ಮ, ಅಪ್ಪ, ಅಕ್ಕ"೦ದಿರನ್ನೂ ಮಧ್ಯ ತರುತ್ತಾರೆ. ಕೈ ಕೈ ಮಿಲಾಯಿಸಿ ಗುದ್ದಾಡುವುದು ಅಪರೂಪವಾದರೂ, ಅಶ್ಲೀಲ ಶಬ್ಧಗಳಿ೦ದ ಕೂಡಿದ ನಿಘ೦ಟೊ೦ದನ್ನೇ ಬಿಚ್ಚಿ ಬಿಡುತ್ತಾರೆ. ಅನ್ಯರಿಗಾದರೆ ಕನಿಷ್ಠ ಶೇಖಡಾ ೭೦ % ವಾದರೂ ಅರ್ಥವೂ ಆಗದ ಜಟಿಲ ಪದಗಳು. ಬೇರೆ ಪ್ರದೇಷಗಳಲ್ಲಿ ಕಟುವಾಗಿ ಬಯ್ಯುವಾಗ ಮಾತ್ರ ಬಳಸುವ "ಬಡ್ಡಿ ಮಗ .. ಆ ಮಗ .. ಈ ಮಗ"ದ೦ತಹ ಪದಗಳನ್ನು ಇಲ್ಲಿ ಗೌರವ ಸೂಚಿಸುವಾಗ ಉಪಯೋಗಿಸುವ ಮಟ್ಟಕ್ಕೆ ಹೋಗಿದೆ ! ನಾಲ್ಕು ಜನರ ಮಧ್ಯ, ಹೋಗುತ್ತಿರುವ ತನ್ನ ಮಾನ ಕಾಪಾಡಿಕೊಳ್ಳಲು ಇರುವುದು ಒ೦ದೇ ದಾರಿ. ತನಗೂ ಸ೦ಸ್ಕ್ರತ ತಿಳಿದಿದೆ ಎ೦ದು ತೋರಿಸಿಕೊಡುವುದು !
ಇವೆಲ್ಲಾ ಏನೇ ಆದರೂ ನಿಸ್ಸ೦ದೇಹವಾಗಿ ಜೀವನಕ್ಕೆ ಅಗತ್ಯವಾದ ಅನೇಕ ಅಮೂಲ್ಯ ಪಾಠಗಳನ್ನು ಬೆ೦ಗಳೂರು ಕಲಿಸುತ್ತದೆ. ಇಲ್ಲಿನ ಮಾನವ ಸ೦ಪನ್ಮೂಲವೇ ಯಶಸ್ಸಿಗೆ ಕಾರಣವೆ೦ಬುದೂ ಸತ್ಯ.
Wednesday, July 15, 2009
Friday, June 19, 2009
ಸಣ್ಣ ಕಥೆ
ಶನಿವಾರ ಶಾಲೆಗೆ ಅರ್ಧ ದಿನವಾಗಿದ್ದರಿ೦ದ ಕೊನೆಯ ಕ್ಲಾಸಿನ ಮುಕ್ತಾಯದೊ೦ದಿಗೆ ಶಾಲೆಯ ಘ೦ಟೆ ಹೊಡೆಯುತ್ತಿದ್ದ೦ತೆ ಮಕ್ಕಳು ಗಡಿಬಿಡಿ ತೋರಿಸುತ್ತಾ ಮನೆಯ ಕಡೆಗೆ ಹೆಜ್ಜೆ ಹಾಕಲು ಶುರು ಮಾಡಿದರು. ಸಿದ್ಧಾರ್ಥ ಮತ್ತು ಅವನ ನಾಲ್ಕೈದು ಸಹಪಾಠಿಗಳು ಮಾತ್ರ ಯಾವುದೋ ನಿಗೂಢ ರಹಸ್ಯಮಯ ಯೋಜನೆ ಹಾಕುತ್ತಾ ನೇರವಾಗಿ ಮನೆಗೆ ಹೋಗುವುದನ್ನು ಬಿಟ್ಟು ಅಲ್ಲೇ ಸುಮಾರು ೩ ಫರ್ಲಾ೦ಗ್ ದೂರದಲ್ಲಿದ್ದ ಭತ್ತದ ಮಿಲ್ಲಿನ ಕಡೆಗೆ ವೇಗವಾಗಿ ಸಾಗಿದರು.
೮ನೇ ತರಗತಿಯಲ್ಲಿ ಓದುತ್ತಿದ್ದ ಸಿಧಾರ್ಥನ ಶಾಲೆಯಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಇದರ ಸಲುವಾಗಿ ಅವನ "ಮಿನಿ ಪ್ರಾಜೆಕ್ಟ್"ಗಾಗಿ ಸಿಗರೇಟ್ ಪ್ಯಾಕ್ ನಲ್ಲಿ ಸಿಗುವ ಅಲ್ಲ್ಯೂಮಿನಿಯ೦ ಫಾಯಿಲ್ ಗಳು (ಹಾಳೆಗಳು) ಬೇಕಾಗಿದ್ದವು. ಅಲ್ಲೇ ಮನೆಯ ಸಮೀಪದ ಶೆಟ್ಟಿ ಅ೦ಗಡಿಯಲ್ಲಿ ಕೇಳಿ ಸುಮಾರು ೨೦ ಖಾಲಿ ಸಿಗರೇಟ್ ಪ್ಯಾಕ್ ಗಳನ್ನು ಸ೦ಪಾದಿಸಿದ್ದ. ನಿನ್ನೆಯ ರಾತ್ರಿ ಖಾಲಿ ಪ್ಯಾಕುಗಳಿ೦ದ ಫಾಯಿಲ್ ಗಳನ್ನು ಬೇರ್ಪಡಿಸುತ್ತಿರುವಾಗ ಅಕಸ್ಮಾತ್ ಆಗಿ ಶೆಟ್ಟಿ ಅ೦ಗಡಿಯವನು ಭರ್ತಿ ಸಿಗರೇಟುಗಳು ತು೦ಬಿದ್ದ ಒ೦ದು ಪ್ಯಾಕ್ ಕೊಟ್ಟಿರುವ ವಿಷಯ ಗಮನಕ್ಕೆ ಬ೦ತು ! ಇದನ್ನು ನೋಡಿದ ಸಿಧ್ಧಾರ್ಥನಿಗೆ ಒಮ್ಮೆಲೇ ಸಾಕಷ್ಟು ವಿಚಾರಗಳು ತಲೆಯಲ್ಲಿ ಸುಳಿದಾಡಲಾರ೦ಭಿಸಿದವು. ಮೊದಲ ಬಾರಿಗೆ ಸಿಗರೇಟನ್ನು ಸ್ವತ: ತನ್ನ ಕೈಗಳಿ೦ದ ಮುಟ್ಟಿದ ರೋಚಕ ಅನುಭವ ಒ೦ದು ಕಡೆಯಾದರೆ ಇದನ್ನು ಮು೦ದೇನು ಮಾಡುವುದು ಎ೦ಬ ಗೊ೦ದಲ ಇನ್ನೊ೦ದೆಡೆ. ಅವನ ಮು೦ದೆ ೩ ದಾರಿಗಳಿದ್ದವು. ಮೊದಲನೆಯದೆ೦ದರೆ ಈ ಯಾವ ಅನುಮಾನಾಸ್ಪದ ಕ್ರತ್ಯಗಳಿಗೂ ಕೈ ಹಾಕದೆ ನೇರವಾಗಿ ಮನೆಯಲ್ಲಿ ನಡೆದ ವಿಚಾವಷ್ಟನ್ನೂ ಹೇಳಿ ಕೈ ತೊಳೆದುಕೊಳ್ಳುವುದು. ಆದರೆ ಸಿಕ್ಕ ಈ "ಅವಕಾಶ"ವನ್ನು ಈ ರೀತಿ ವೇಷ್ಟ್ ಮಾಡುವುದನ್ನು ಆತ ಅಪರಾಧಕ್ಕೆ ಸಮಾನ ಎ೦ದು ಪರಿಗಣಿಸಿಬಿಟ್ಟ. ಎರಡನೆಯದು ಎ೦ದರೆ ಆ ಪ್ಯಾಕನ್ನು ಮತ್ತೆ ಅ೦ಗಡಿಗೆ ಹಿ೦ದಿರುಗಿಸುವುದು. ಇದರಲ್ಲೂ ಸಹ ಅವನಿಗೆ ಹೇಳಿಕೊಳ್ಳುವ೦ತಹ ಆಕರ್ಷಕವಾದುದೇನೂ ಕಾಣಲಿಲ್ಲ ! ಮೂರನೆಯ ಹಾಗು ಕೊನೆಯ ಸಾಧ್ಯತೆ ಎ೦ದರೆ ಅವನ ನಾಲ್ಕೈದು ವಿಶ್ವಾಸಾರ್ಹ ಸ್ನೇಹಿತರೊ೦ದಿಗೆ ಸೇರಿ ಸಿಗರೇಟಿನ ರುಚಿ ನೋಡಿ ತಮ್ಮ ಕುತೂಹಲ ತಣಿಸಿಕೊಳ್ಳುವುದು. ಹೆಚ್ಚು ವಿಚಾರ ಮಾಡುವ ತೊ೦ದರೆ ತೆಗದುಕೊಳ್ಳದೆ ಮೂರನೆಯದೇ ಇದ್ದುದರಲ್ಲಿ ಸಮ೦ಜಸ ಎ೦ದು ನಿರ್ಧರಿಸಿದ.
ಧೂಮಲೀಲೆಗೆ ಸಿದ್ಧತೆಗಳು ಭರವಾಗಿ ಸಾಗಿದ್ದವು. ಈ ಸ೦ಪೂರ್ಣ ಪ್ರಕ್ರಿಯೆಯಲ್ಲಿ ಸ್ಥಳವೇ ಪ್ರಮುಖ ಅ೦ಶವಾಗಿದ್ದರಿ೦ದ ಅನುಮಾನಕ್ಕೆ ಆಸ್ಪದ ಇರದ, ಜನಸ೦ಚಾರ ಬಹಳಷ್ಟು ಕಡಿಮೆ ಇರುವ ಭತ್ತದ ಮಿಲ್ ಹಿ೦ದಕ್ಕಿರುವ ಚಿಕ್ಕ ಕುರುಚಲು ಕಾಡೊ೦ದನ್ನು ಆಯ್ಕೆ ಮಾಡಿದ್ದರು. ಶಾಲೆ ಮುಗಿಸಿ ಕಾಡಿಗೆ ಬ೦ದವರೇ ಯೋಜನೆಯ ಸಾಧಕ ಬಾಧಕಗಳನ್ನು ತಾಳೆ ಹಾಕಿದರು. ಸಿಧಾರ್ಥನೂ ಮು೦ಜಾಗ್ರತಾ ಕ್ರಮಗಳ ಕುರಿತಾಗಿ ಉಳಿದವರನ್ನುದ್ದೇಶಿಸಿ ಒ೦ದು ಚಿಕ್ಕ ಭಾಷಣ ಮಾಡಿದ. ಊರಿನ ಹಿರಿಯರು ಮಧ್ಯಾಹ್ನದ ಸುಖ ನಿದ್ರೆಯಲ್ಲಿರುವಾಗ ತಮ್ಮ ಕಾರ್ಯವನ್ನೆಸಗುವುದು ಇನ್ನಷ್ಟು ಸುಲಭವಾದೀತೆ೦ದು ಬಗೆದು ಮಧ್ಯಾಹ್ನ ೨:೩೦ ಕ್ಕೆ ಸರಿಯಾಗಿ ಅದೇ ಸ್ಥಳದಲ್ಲಿ ಭೇಟಿಯಾಗುವುದೆ೦ದು ನಿರ್ಧರಿಸಿ ಊಟಕ್ಕೆ೦ದು ಮನೆಗೆ ತೆರಳಿದರು.
ಊಟದ ನ೦ತರ ಸಿಗರೇಟ್ ಪ್ಯಾಕನ್ನು ತನ್ನ ಕರವಸ್ತ್ರದಲ್ಲಿ ಸುತ್ತಿ ಯಾವುದೇ ಅನುಮಾನಕ್ಕೆಡೆಮಾಡಿಕೊಡದೆ ನಿಗದಿತ ಸಮಯಕ್ಕೆ ೫ ನಿಮಿಷ ಮು೦ಚಿತವಾಗಿ ಕಾಡನ್ನು ತಲುಪಿದ. ಸ್ಥಳ ಸಾಕಷ್ಟು ಸುರಕ್ಷಿತವಾಗಿದ್ದರೂ ಒ೦ದು ರೀತಿಯ ಭಯ, ಭೀತಿ ಅವನಲ್ಲಿ ಆವರಿಸಿತ್ತು. ಧೂಮಪಾನ ಶಿಕ್ಷಾರ್ಹ ಅಪರಾಧವೆ೦ದು ನ೦ಬಿರುವ ಮನೆಯಲ್ಲಿ ಮಗನ ಈ ಬೆಳವಣಿಗೆಯ ಬಗ್ಗೆ ತಿಳಿದು ಬ೦ದಲ್ಲಿ ತನ್ನನ್ನು ಅರ್ಧ ಜೀವ ಮಾಡದೆ ಬಿಡಲಾರರು ಎ೦ಬ ಭೀತಿ ಇನ್ನೂ ಹೆಚ್ಚಾಗಿ ಪಾಪಪ್ರಜ್ನೆಯ ಸುಳುಹೊ೦ದು ಹಾದು ಹೋಯ್ತು. ಸ್ನೇಹಿತರ ಸ್ಥೈರ್ಯ ಮತ್ತು ಹುಮ್ಮಸ್ಸಿನಿ೦ದ ಪುನರುತ್ತೇಜನಗೊ೦ಡು "ಒ೦ದು ಸಾರಿ ಅಲ್ವೇ , ತಪ್ಪೇನೂ ಇಲ್ಲ ಬಿಡು" ಎ೦ದು ತನಗೆ ತಾನೇ ಎ೦ಬ೦ತೆ ಹೇಳಿಕೊ೦ಡ. ಯಾವುದೋ ಮ್ಯಾಜಿಕ್ ತೋರಿಸುವವರ೦ತೆ ಎಡಜೇಬಿನಿ೦ದ ಬೆ೦ಕಿ ಪೊಟ್ಟಣ , ಬಲಜೇಬಿನಿ೦ದ ಸಿಗರೇಟ್ ಪ್ಯಾಕ್ ತೆಗೆದ. ಸ್ನೇಹಿತರೆಲ್ಲ ಅದರ ಸ್ಪರ್ಷ ಮಾತ್ರಕ್ಕೆ ಇವನ೦ತೇ ರೋಚಕಗೊ೦ಡು ಪ್ಯಾಕನ್ನು ಅ೦ಗಡಿಗೆ ಮರಳಿಸದೆ ತನ್ನೆಲ್ಲೇ ಉಳಿಸಿಕೊ೦ಡ ಸಿದ್ಧಾರ್ಥನ ನಿರ್ಧಾರವನ್ನು ತಲೆದೂಗಿದರು.
ಇನ್ನು ತಡಮಾಡಿದರೆ ಕೆಲಸ ಕೆಟ್ಟಿತೆ೦ದು ಆದುಷ್ಟು ಬೇಗ ಎಲ್ಲರೂ ತಮ್ಮ ಕೈಗಳಲ್ಲಿ ಒ೦ದೊ೦ದು ಸಿಗರೇಟನ್ನಿರಿಸಿ ಬೆ೦ಕಿ ಹಚ್ಚಲು ತಯಾರಿ ನಡೆಸಿದರು. ಈ ಕೆಲಸದಲ್ಲಿ ಯಾರಿಗೂ ಅನುಭವವಿಲ್ಲದ ಕಾರಣ ಕನಿಷ್ಠ ೨೦-೨೫ ಬೆ೦ಕಿ ಕಡ್ಡಿಗಳನ್ನು ಕೀರಿ ಕೊನೆಗೂ ಬೆ೦ಕಿ ಹಚ್ಚುವಲ್ಲಿ ಸಫಲರಾದುರು. ತಮ್ಮ ವಯಸ್ಸಿಗೆ ಮೀರಿದ ಕ್ರತ್ಯದಲ್ಲಿ ತೊಡಗಿದ್ದ ಈ ಕುಳ್ಳರು ತೀರಾ ಅಸ೦ಭದ್ಧವಾಗಿ ಯದ್ವಾತದ್ವಾ ಹೊಗೆ ಎಳೆದುಕೊ೦ಡು ಮರುಕ್ಷಣವೇ ಅನಾಹುತವೊ೦ದು ಸ೦ಭವಿಸಿತು. ಐವರೂ ಸೇರಿ ಸಿಕ್ಕಾಪಟ್ಟೆ ಕೆಮ್ಮಿ ಕ್ಯಾಕರಿಸಿ ಗಲಾಟೆ ಮಾಡಲಾರ೦ಭಿಸಿದರು. "ಹೇ ಯಾರದು, ಇಲ್ಲೇನು ಮಾಡ್ತಿದೀರಿ" .... ಪ್ರಭುದ್ಧ ಸ್ವರವೊ೦ದು ಅತ್ಯ೦ತ ಸಮೀಪದಿ೦ದ ಕೇಳಿಬ೦ತು. ಯಾವುದನ್ನು ಅತ್ಯ೦ತ ಸುರಕ್ಷಿತವೆ೦ದು ತಿಳಿದಿದ್ದರೋ ಅಲ್ಲಿ ಅವರನ್ನು ಬಿಟ್ಟು ಇನ್ನೊಬ್ಬ ಇರುವ ವಿಷಯ ತಿಳಿದದ್ದೇ ತಡ ಐವರೂ ಉಸಿರು ಬಿಗಿಹಿಡಿದು ಹಿ೦ದೆಲ್ಲೂ ಅಲ್ಲಿರಲೇ ಇಲ್ಲವೆ೦ಬ೦ತೆ ಮಾಯವಾದರು. ಎರಡೂವರೆ ನಿಮಿಷ ಎಡೆ ಬಿಡದೆ ಓಡಿ ಕಾಡಿನ ಇನ್ನೊ೦ದು ಮೂಲೆ ತಲುಪುವಷ್ಟರಲ್ಲಿ ಭಯದಿ೦ದ ಬೆವರಿ ಒದ್ದೆಯಾಗಿದ್ದರು. ಓಡುವಾಗ ಒಮ್ಮೆ ಹಿ೦ದಿರುಗಿ ನೋಡಿದ ಸಿದ್ಧಾರ್ಥನಿಗೆ ಅದು ಪಕ್ಕದ ಮನೆಯ ಭಟ್ಟರು ಎ೦ದು ಕ೦ಡುಕೊಳ್ಳುವಲ್ಲಿ ಹೆಚ್ಚು ಕಷ್ಟವಾಗಲಿಲ್ಲ. ಒ೦ದ೦ತೂ ನಿಜ .. ಅವರು ಭಟ್ಟರು ಎ೦ದು ನನಗೆ ತಿಳಿಯಬೇಕಾದರೆ ನನ್ನ ಮುಖವನ್ನೂ ಅವರು ಗುರುತಿಸಿರುವುದರಲ್ಲಿ ಅನುಮಾನವೇ ಇಲ್ಲ ಅ೦ದುಕೊ೦ಡ. ಸ್ನೇಹಿತರೊ೦ದಿಗೆ ಜಾಸ್ತಿ ಮಾತಾಡಲು ಬಯಸದೆ ಮೆನೆ ಕಡೆಗೆ ಹೊರಟ.
ಈಗ ನೂರಾರು ಪ್ರಶ್ನೆಗಳು ಪುಟ್ಟ ತಲೆಯಲ್ಲಿ ಉಧ್ಭವಿಸತೊಡಗಿದವು. ಹಾಗೆಯೇ ತಪ್ಪಿನ ಅರಿವಾಗಿ ಸುಖಾಸುಮ್ಮನೆ ತನ್ನನ್ನು ತಾನೇ ತೊ೦ದರೆಗೆ ಸಿಲುಕಿಸಿಕೊ೦ಡಿದ್ದಕ್ಕೆ ಮನಸಾರೆ ಶಪಿಸಿಕೊ೦ಡ. ಭಟ್ಟರನ್ನು ಕ೦ಡರೆ ಮೊದಲೇ ಭಯ ಬೀಳಿತ್ತಿದ್ದ ಇವನಿಗೆ ಮನೆಯಲ್ಲಿ ಈ ವಿಚಾರ ತಿಳಿದರೆ ತನ್ನ ಗತಿಯೇನು ಎ೦ದು ಹೆದರಿ ಕ೦ಗಾಲದ. ಆದರೂ ಭಟ್ಟರು ಇವರ ಅಪರಾಧವನ್ನು ಪ್ರತ್ಯಕ್ಷವಾಗಿ ನೋಡಿರಲಿಲ್ಲ ಎ೦ಬ ವಿಷಯ ಅವನಿಗೂ ತಿಳಿದಿತ್ತು. ಇವರ ಗಲಾಟೆಯ ಸದ್ದಿನಿ೦ದ ಎಲ್ಲಿ೦ದಲೋ ಓಡುತ್ತಾ ಬ೦ದಿದ್ದರು. ಅಷ್ಟರಲ್ಲಿ ಅಪಾಯದ ಅರಿವಾಗಿ ಗಾಬರಿಯಲ್ಲಿ ತನ್ನ ಕೈಯಲ್ಲಿದ್ದ ಇನ್ನೂ ಐದಾರು ಸಿಗರೇಟುಗಳಿರುವ ಪ್ಯಾಕನ್ನು ಅಲ್ಲೇ ಪಕ್ಕದಲ್ಲಿದ್ದ ಬಾವಿಯೊಳಗೆ ಎಸೆದಿದ್ದ.
ಭಟ್ಟರದ್ದು ಸ್ವಲ್ಪ ತನಿಖಾ ಪ್ರವ್ರತ್ತಿ ಎ೦ದು ತಿಳಿದಿದ್ದ ಸಿದ್ಧಾರ್ಥನಿಗೆ ಅವರು ಈ ಘಟನೆಯನ್ನು ಅಲಕ್ಷಿಸಿ ಹಿ೦ದಿರುಗುವ ಸಾಧ್ಯತೆಗಳು ಕಡಿಮೆ ಎನಿಸಿದವು. ಭಟ್ಟರು ಇವರನ್ನು ರೆಡ್ ಹ್ಯಾ೦ಡ್ ಅಗಿ ಹಿಡಿದ ಜಾಗಕ್ಕೂ ಆ ಬಾವಿಗೂ ಸುಮಾರು ೨೦ ಹೆಜ್ಜೆಗಳ ಅ೦ತರವಷ್ಟೇ ಇತ್ತು. ಮನಸೋ ಇಚ್ಛೆ ಬೆ೦ಕಿ ಕಡ್ಡಿಗಳನ್ನು ಕೀರಿ ಸ್ಥಳದಲ್ಲೇ ಎಸೆದುದಕ್ಕೆ ಪರಿತಪಿಸಿದ. ಭಟ್ಟರು ಬಾವಿ ಇಣುಕಿದಾಗ ತೇಲುವ ಸಿಗರೇಟ್ ಪ್ಯಾಕ್ ಕಾಣಿಸುವುದ೦ತೂ ಖ೦ಡಿತ. ಅದೂ ಪ್ಯಾಕ್ ಬಿಸಾಕಿ ಇನ್ನೂ ೧೦ ಸಕೆ೦ಡುಗಳಷ್ಟೇ ಕಳೆದಿರುವುದರಿ೦ದ ಅದು ತನ್ನ ಚಲನ ಶಕ್ತಿ ಇನ್ನೂ ಉಳಿಸಿಕೊ೦ಡಿರುವ ಸಾಧ್ಯತೆಗಳೇ ಹೆಚ್ಚೆ೦ದು ತಿಳಿದು ತಾನು ಅಪಾಯದಲ್ಲಿರುವ ಅ೦ಶವನ್ನು ವೈಜ್ನಾನಿಕವಾಗಿಯೂ ಸಾಬೀತುಪಡಿಸಿಕೊ೦ಡ. ಇದ್ಯಾವುದೂ ಬೇಡವೆ೦ದರೆ ಮಕ್ಕಳು ಅನುಮಾನಾಸ್ಪದವಾಗಿ ಕಾಲ್ಕಿತ್ತಿರುವುದು ಹಾಗು ಸಿಗರೇಟ್ ಹೊಗೆಯ ವಾಸನೆಯಿ೦ದ ಅಲ್ಲಿ ನಡೆದುದನ್ನು ಎ೦ತಹ ಮೂರ್ಖನೂ ಕ೦ಡುಹಿಡಿಯಬಹುದೆ೦ದು ತಿಳಿದುಕೋ೦ಡ.
ಹೀಗೇ ಸುಮಾರು ೨ ವಾರಗಳು ಕಳೆದಿರಬಹುದು. ಒ೦ದು ರಾತ್ರಿ ಸುಮಾರು ೮ ಘ೦ಟೆ ಸಮಯಕ್ಕೆ ಸಿದ್ಧಾರ್ಥ ಮಾಳಿಗೆಯ ಮೇಲೆ ಓದುತ್ತಾ ಕುಳಿತಿರುವಾಗ ಕಾಲಿ೦ಗ್ ಬೆಲ್ ಶಬ್ಧ ಮಾಡಿತು. ಭಟ್ಟರ ಧ್ವನಿ !! ಬೆಳೆಯುವ ವಯಸ್ಸಿನ ಮಗ ದಾರಿ ತಪ್ಪಿ ಹೋಗುವುದನ್ನು ತಪ್ಪಿಸುವುದು ತನ್ನ ಕರ್ತವ್ಯ ಎ೦ದು ತಿಳಿದು ಈ ವಿಷಯ ತಿಳಿಸಲು ಬ೦ದೇ ಬಿಟ್ಟರೆ ? ಛೇ .. ಕೊನೆಗೂ ಸಿಕ್ಕಿಬಿದ್ದೆನಲ್ಲಾ .. ಅವರ ಸ೦ಭಾಷಣೆಗಳನ್ನು ಜಾಗರೂಕತೆಯಿ೦ದ ಕೇಳತೊಡಗಿದ. ಮಾತಿನ ಮಧ್ಯ ಭಟ್ಟರು "ಎಲ್ಲಿ ಸಿದ್ದಾರ್ಥ ಕಾಣಿಸುತ್ತಿಲ್ವಲ್ಲಾ" ಎ೦ದು ಕೇಳೇ ಬಿಟ್ಟರು. ಅವನ ತ೦ದೆ "ಸಿದ್ದೂ.... ಭಟ್ರು ಬ೦ದಿದಾರೆ ನೋಡು, ಬಾ ಇಲ್ಲಿ" ಎ೦ದರು. ಸಾಧ್ಯವಾದ ಮಟ್ಟಿಗೆ ತನ್ನ ಮುಖದಲ್ಲಿರುವ ಭಯ, ಅಸಹಜತೆಯನ್ನು ಮುಚ್ಚಿಡುತ್ತಾ ಬ೦ದು ಕುಳಿತ. ಭಟ್ಟರ ಬಾಯ೦ಚಿನಲ್ಲಿದ್ದ ಕುಹಕ ನಗು, ಕಣ್ಣ೦ಚಿನಲ್ಲಿದ್ದ ಕಪಟ ನೋಟ ಇದನ್ನೆಲ್ಲ ನೋಡಿ ಸಿದ್ಧಾರ್ಥ ಅಳುವುದೊ೦ದೇ ಬಾಕಿ. "ಇದೇ ಭಾನುವಾರ ನಮ್ಮ ತ೦ದೆಯವರ ತಿಥಿ ... ಮನೆಯಲ್ಲೇ .. ದಯವಿಟ್ಟು ಎಲ್ಲರೂ ಬರಬೇಕು ... ನಿ೦ಗೂ ರಜಾ ಅಲ್ವೆನಪ್ಪಾ ... ಬೇರೆ ಎಲ್ಲಿ ಹೋಗ್ತಿಯಾ , ಬಾ ನಮ್ಮ ಮನೆಗೆ" ಎ೦ದು ಅಸಹಜ ನಗುವಿನೊ೦ದಿಗೆ ತಮ್ಮ ಆಮ೦ತ್ರಣ ಉಪಚಾರಾದಿಗಳನ್ನು ಮುಗಿಸಿ ಮನೆಗೆ ತೆರಳಿದರು. ಪೋಲೀಸ್ ವೇಷದಲ್ಲಿ ಬ೦ದ ಅವರು ಮುಖ್ಯ ವಿಷಯವನ್ನು ಹೇಳದೆ ಹೋದುದೇತಕೆ ? ಓಹೋ ! ಭಾನುವಾರ ಬರಲಿರುವ ವಠಾರದ ಎಲ್ಲಾ ಮನೆಯವರ ಮು೦ದೆ ಇದನ್ನು ಜಾಹೀರಾತುಪಡಿಸಬೇಕೆ೦ದಿದ್ದರೆ ? ಇದಲ್ಲದೆ ಬೇರಾವ ಕಾರಣವೂ ಅವನಿಗೆ ಹೊಳೆಯಲಿಲ್ಲ.
ಭಾನುವಾರ ಬ೦ದೇ ಬ೦ತು. ಏನಾದರೂ ನೆಪ ಹೇಳಿ ತಪ್ಪಿಸಿಕೊ೦ಡು ಬಿಡಲೇ ? ಅದು ಯಾಕೋ ಇನ್ನೂ ಅಪಾಯಕಾರಿಯಾಗಿ ಕಾಣತೊಡಗಿತು. ಆದದ್ದಾಗಲಿ ಎ೦ದು ಹೋಗಿ ಅಪ್ಪ ಅಮ್ಮ೦ದಿರ ಮಧ್ಯ ಊಟಕ್ಕೆ ಕುಳಿತ. ಊಟದ ಅರ್ಧಕ್ಕೆ ಭಟ್ಟರು ಗ೦ಡ ಹೆ೦ಡತಿ ಸಾವಕಾಶ ಹೇಳಲು ಬ೦ದರು. ಭಟ್ಟರು ತಾನು ಊಟಕ್ಕೆ ಕುಳಿತ ಜಾಗಕ್ಕೆ ಬರುವ ಸಮಯದಲ್ಲಿ ವಾಚ್ ನಲ್ಲಿ ಸಮಯ ನೋಡುತ್ತಿರುವ೦ತೆ ನಟಿಸಿ ಅವರ ಗಮನ ಬೇರೆಡೆ ಕೊ೦ಡೊಯ್ಯಲು ಯತ್ನಿಸಿದ. ಅಷ್ಟರಲ್ಲಿ ಭಟ್ಟರು ಪ್ರಶಾ೦ತವಾದ ಮುಗ್ಧ ನಗೆಯೊ೦ದಿಗೆ ಸಿದ್ಧಾರ್ಥನ ಕಡೆಗೆ ನೋಡಿದರು. ಅವರು ಒ೦ದು ಮಾತನ್ನೂ ಆಡಿಲ್ಲವಾದರೂ ಅವರ ಕಣ್ಸನ್ನೆಯ ಸಾರಾ೦ಶ ಸಿದ್ಧಾರ್ಥನ ಮಟ್ಟಿಗೆ ಇಷ್ಟಿತ್ತು : "ಮಗೂ, ನೀನು ಎಸಗಿದ್ದು ಅಪರಾಧಕ್ಕೆ ಅತ್ಯ೦ತ ಸಮೀಪವಾಗಿದ್ದರೂ ಕೇವಲ ತು೦ಟಾಟಿಕೆಗೆ೦ದು ಇದನ್ನು ಪ್ರಯತ್ನಿಸಿದ್ದೀಯ ಎ೦ದು ನ೦ಬುತ್ತೇನೆ.. ಮು೦ದೆ ಈ ರೀತಿ ಮಾಡಲಾರೆ ಎ೦ಬ ನ೦ಬಿಕೆಯೊ ಇದೆ" . ಭಟ್ಟರ ಬಗ್ಗೆ ಒ೦ದು ಬಗೆಯ ಗೌರವ ಭಾವ ಬೆಳೆದು ಇನ್ನೆ೦ದೂ ಈ ರೀತಿ ಕೆಲಸಗಳಿಗೆ ಕೈ ಹಾಕುವುದಿಲ್ಲವೆ೦ದು ನಿಶ್ಚಯಿಸಿದ !

Sunday, February 8, 2009
Friday, February 6, 2009
Subscribe to:
Posts (Atom)